ರಾಜ್ಯದ ಈ ಜಿಲ್ಲೆಗಳಲ್ಲಿ ಇನ್ನೂ 5 ದಿನ ಭಾರಿ ಮಳೆ, ಹೈದರಾಬಾದ್‌ನಲ್ಲಿ ಭಾರೀ ಮಳೆ ಸಾಧ್ಯತೆ

ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಪರಿಣಾಮ ಕರ್ನಾಟಕದಲ್ಲೂ ಧಾರಾಕಾರ ಮಳೆಯಾಗುತ್ತಿದ್ದು, ಮುಂದಿನ 5 ದಿನ ಮುಂದುವರಿಯಲಿದೆ. ಈಗಾಗಲೇ ಭೀಮಾ ಪ್ರವಾಹ ಉಂಟಾಗಿದ್ದು, ಕಲಬುರಗಿ ವಿಜಯಪುರ ಸೇರಿದಂತೆ ಸುತ್ತಮುತ್ತಲ ಜಿಲ್ಲೆಗಳ ಜನರ ಬದುಕು ಮೂರಬಟ್ಟೆಯಾಗಿದೆ.
ಉತ್ತರ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಸೋಮವಾರವೂ ಮಳೆ ಅಬ್ಬರ ಜೋರಾಗಿತ್ತು. ಬಾಗಲಕೋಟೆ, ಬೀದರ್​, ಗದಗ, ಕಲಬುರಗಿ, ಕೊಪ್ಪಳ, ರಾಯಚೂರು ಹಾಗೂ ಯಾದಗಿರಿಯಲ್ಲಿ ಮುಂದಿನ 24 ಗಂಟೆ ಭಾರಿ ಮಳೆಯಾಗಲಿರುವ ಹಿನ್ನೆಲೆಯಲ್ಲಿ ಯೆಲ್ಲೋ ಅರ್ಲಟ್​ ಘೋಷಿಸಲಾಗಿದೆ.
ಕರಾವಳಿಯ ಉಡುಪಿ, ದಣ ಕನ್ನಡ ಹಾಗೂ ಉತ್ತರ ಕನ್ನಡದಲ್ಲಿ ಅ.21ರಿಂದ ಅ.24ರವರೆಗೆ ಯೆಲ್ಲೋ ಅಲರ್ಟ್​ ಇರಲಿದೆ. ದಕ್ಷಿಣ ಒಳನಾಡಿನ ಬೆಂಗಳೂರು, ಬೆಂ. ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಕೊಡಗು, ಮಂಡ್ಯ, ಮೈಸೂರು, ರಾಮನಗರ ಮತ್ತು ಶಿವಮೊಗ್ಗದಲ್ಲಿ ಅ.20ರಂದು ಯೆಲ್ಲೋ ಅಲರ್ಟ್​​ ಇರಲಿದ್ದು, ಗುಡುಗು ಮಿಂಚು ಸಹಿತ ಧಾರಾಕಾರ ಮಳೆಯಾಗುವ ನಿರೀಕ್ಷೆ ಇದೆ ಎಂದು ಇಲಾಖೆ ಮಾಹಿತಿ ನೀಡಿದೆ.

ಹೈದರಾಬಾದ್‌ನಲ್ಲಿ ಭಾರೀ ಮಳೆ ಸಾಧ್ಯತೆ
ಹೈದರಾಬಾದ: ಹೈದರಾಬಾದ್‌ನಲ್ಲಿ ಕಳೆದ ವಾರ ಸುರಿದ ಭಾರೀ ಮಳೆಯಿಂದಾಗಿ ತೆಲಂಗಾಣದಲ್ಲಿ 69 ಮಂದಿ ಸಾವನ್ನಪ್ಪಿದ್ದರು. ಪ್ರಮುಖ ಮೂರು ಸರೋವರಗಳು ಉಕ್ಕಿ ಹರಿದ ಪರಿಣಾಮ ಭಾರೀ ನೆರೆ ಸೃಷ್ಟಿಯಾಗಿ, ನಗರದ ವಿವಿಧ ಭಾಗಗಳಲ್ಲಿ ವ್ಯಾಪಕ ಹಾನಿ ಉಂಟಾಗಿತ್ತು. ಈಗ ಹವಾಮಾನ ಇಲಾಖೆ ಮುಂದಿನ ಮೂರು ದಿನಗಳ ವರೆಗೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ನೆಚ್ಚರಿಕೆ ನೀಡಿದೆ. ಆದುದರಿಂದ ಆಡಳಿತ ಹೆಚ್ಚಿನ ಮಳೆ ಹಾಗೂ ಪ್ರವಾಹ ಎದುರಿಸಲು ಸಜ್ಜಾಗಿದೆ.
ಹಳೇ ನಗರ ಪ್ರದೇಶದ ವಿವಿಧ ಭಾಗಗಳಲ್ಲಿ ನೆರೆ ಪರಿಸ್ಥಿತಿ ಮುಂದುವರಿದಿದೆ. ನೆರೆ ಸಂತ್ರಸ್ತರನ್ನು ಸುರಕ್ಷಿತ ಸ್ಥಳಗಳಿಗೆ ವರ್ಗಾಯಿಸಲು ಹಾಗೂ ಅವರಿಗೆ ವಾಸ್ತವ್ಯ ಕಲ್ಪಿಸಲು ಪೊಲೀಸರು, ವಿಪತ್ತು ಪ್ರತಿಸ್ಪಂದನಾ ಪಡೆ ಹಾಗೂ ನಗರಾಡಳಿತ 24 ಗಂಟೆಗಳ ಕಾಲ ಅವಿರತವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಶನಿವಾರ ಸಂಜೆ ಸುರಿದ ಎರಡನೇ ಭಾರೀ ಮಳೆಗೆ ಇಬ್ಬರು ಮಕ್ಕಳು ಸಹಿತ 6 ಮಂದಿ ಮೃತಪಟ್ಟಿದ್ದಾರೆ. ಮಂಗಳವಾರ ಹಾಗೂ ಬುಧವಾರ ಸುರಿದ ಧಾರಾಕಾರ ಮಳೆಯಿಂದ ಉಂಟಾದ ನೆರೆಯಲ್ಲಿ ಕೊಚ್ಚಿಕೊಂಡ ಹೋದ ಕಾರಿನಲ್ಲಿ ಪತ್ತೆಯಾಗಿರುವ ಮೃತದೇಹ ಸೇರಿದಂತೆ ಹಲವು ಮೃತದೇಹಗಳು ಪತ್ತೆಯಾಗಿವೆ.
ಕಳೆದ ವಾರ ಒಂದೇ ದಿನ ತೆಲಂಗಾಣದ ರಾಜಧಾನಿ ಭಾರೀ ಮಳೆಗೆ ಸಾಕ್ಷಿಯಾಯಿತು. ನಗರ ಹಾಗೂ ನಗರದ ಸುತ್ತಮುತ್ತ ಪ್ರದೇಶಗಳಲ್ಲಿ 20ರಿಂದ 32 ಸೆಂಟಿ ಮೀಟರ್ ನಷ್ಟು ಮಳೆ ದಾಖಲಾಗಿತ್ತು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Share via
Copy link
Powered by Social Snap