ಶೋಭಾಯಾತ್ರೆಯಲ್ಲಿ ನಾಡಿನ ಜಾನಪದ ಸಿರಿ ಅನಾವರಣ

ಹಂಪಿ: ವಿಜಯನಗರ ಸಾಮ್ರಾಜ್ಯದ ಗತವೈಭವ ಸಾರುವ ಹಂಪಿ ಉತ್ಸವದಲ್ಲಿ ಹಂಪಿಯ ಉದ್ಧಾನ ವೀರಭದ್ರೇಶ್ವರ ದೇವಸ್ಥಾನದಿಂದ ಆರಂಭವಾದ ವೀರೂಪಾಕ್ಷೇಶ್ವರ ದೇವಸ್ಥಾನದವರೆಗೆ ನಡೆದ ವಿವಿಧ ಜಾನಪದ ಕಲಾತಂಡಗಳ ಶೋಭಾಯಾತ್ರೆ ಮೆರವಣಿಗೆಯು ನಾಡಿನ ಜಾನಪದ ಸಿರಿಯನ್ನು ಅನಾವರಣಗೊಳಿಸಿತು.
ಸಂಜೆಯ ದಿನಕರ ತಾಯಿಯ ಮಡಿಲನ್ನು ಸೇರುವ ತವಕದಲಿದ್ದಾಗ, ಇತ್ತ ಹಂಪಿಯ ಉದ್ಧಾನ ವೀರಭದ್ರೇಶ್ವರ ದೇವಸ್ಥಾನದ ಬೀದಿಯ ಉದ್ದಕ್ಕೂ ಶೋಭಾಯಾತ್ರೆಯ ಸಂಭ್ರಮ. ಸಾಂಪ್ರದಾಯಿಕ ನಾದಸ್ವರದೊಂದಿಗೆ ಸುಮಂಗಲಿಯರು  ಮಂಗಳಾರತಿ ಬೆಳಗುವುದರ ಮೂಲಕ ಸಚಿವ ಆನಂದ್ ಸಿಂಗ್ ಅವರನ್ನು ಹಂಪಿ ಉತ್ಸವಕ್ಕೆ ಸ್ವಾಗತಿಸಿದರು, ಗಣ್ಯ ಮಾನ್ಯರನ್ನು ಸ್ವಾಗತಿಸಲೆಂದೇ ಆಗಮಿಸಿದಂತಿದ್ದ ಗಜಗಳು ಗಾಂಭೀರ್ಯದಿಂದ ಮೆರವಣಿಗೆಯಲ್ಲಿ ಹೆಜ್ಜೆಯನ್ನಾಕುತ್ತಿದ್ದರೆ, ವಿವಿಧೆಡೆಯಿಂದ ಆಗಮಿಸಿದ್ದ ಜನರು ಈ ಶೋಭಾಯಾತ್ರೆಯಲ್ಲಿ ಭಾಗಿಯಾಗಿದ್ದರು. ಶೋಭಾಯಾತ್ರೆಯ ಮುಂಭಾಗದಲ್ಲಿ ಕಹಳೆ ವಾದನವು ಉತ್ಸವದ ಆರಂಭಕ್ಕೆ ಶುಭ ಕೋರಿದಂತಿತ್ತು. ಯಾತ್ರೆಯಲ್ಲಿ ಸಾಗಿಬಂದ ವೀರಗಾಸೆ, ಡೊಳ್ಳು ಕುಣಿತ, ಹಲಗೆ ವಾದನ, ಕಹಳೆ ವಾದನ, ನಂದಿಧ್ವಜ ಪ್ರದರ್ಶನ ವಿಜಯನಗರ ಸಾಮ್ರಾಜ್ಯದಲ್ಲಿ ಶ್ರೀ ಕೃಷ್ಣದೇವರಾಯನ ಒಡೋಲಗವೇ ಸಾಗುತ್ತಿರುವಂತೆ ನೋಡುಗರನ್ನು ವರ್ತಮಾನದಿಂದ ಇತಿಹಾಸಕ್ಕೆ ಎಳೆದೊಯ್ಯುವಂತಿತ್ತು.
ಹಗಲುವೇಷ,ಸಿಂದೋಳ್ ಕುಣಿತ,ಹಕ್ಕಿಪಿಕ್ಕಿ ಬುಡಕಟ್ಟು ನೃತ್ಯ,ಗೊರವರ ಕುಣಿತ,ಮರಗಾಲು ಕುಣಿತ,ಕೀಲುಕುದುರೆ ಪ್ರದರ್ಶನ ಗಮನಸೆಳೆದವು. ಜಾನಪದ ಐಸಿರಿಯನ್ನು ಜನರು ಕಣ್ತುಂಬಿಕೊಂಡರು.
ಮೆರವಣಿಗೆಯನ್ನು ಸ್ಮರಣೀಯವಾಗಿಸಿಕೊಳ್ಳಲು, ಕೆಲವರು ತಮ್ಮ ಮೊಬೈಲ್‍ಗಳಿಂದ ಫೆÇೀಟೋಗಳನ್ನು ಕ್ಲಿಕ್ಕಿಸಿಕೊಳ್ಳುತ್ತಿದ್ದರೆ, ಹಲವರು ಮೆರವಣಿಗೆಯಲ್ಲಿ ತಾವೂ ಸಾಗುತ್ತ ವಿಡಿಯೋ ದೃಶ್ಯ ಚಿತ್ರೀಕರಿಸಿಕೊಳ್ಳುತ್ತಿದ್ದುದು ಕಂಡುಬಂದಿತು.
ಶೋಭಾಯಾತ್ರೆ ಕಲಾವಿದರ ಉತ್ಸಾಹದಿಂದ ತುಂಗಾರತಿ ಕಾರ್ಯಕ್ರಮ ಸಮಾರಂಭ ಆರಂಭಗೊಳ್ಳುವವರೆಗೂ ತಾರಕಕ್ಕೇರಿದ್ದು ವಿಶೇಷವಾಗಿತ್ತು.
ಹಂಪಿ ಉತ್ಸವ ಮೆರವಣಿಗೆಯಲ್ಲಿ ಭಾಗವಹಿಸುವ ಕಲಾತಂಡಗಳಿವು: ಬಳ್ಳಾರಿ ತಾಲ್ಲೂಕಿನ  ಮೋಹನ್ ಮತ್ತು ತಂಡದವರ ತಾಷರಂಡೋಲ್, ಕುರುಗೋಡು ಚನ್ನಸ್ವಾಮಿ ಮತ್ತು ತಂಡದಿಂದ ಹಗಲುವೇಷ, ಹಗರಿಬೊಮ್ಮನಹಳ್ಳಿಯ ಏಣಿಗಿ ರಾಮಪ್ಪ ಮತ್ತು ತಂಡದವರ ಹಲಗೆ ವಾದನ,  ಸಂಡೂರು ಚಂದ್ರಶೇಖರ್ ಮತ್ತು ತಂಡದವರಿಂದ ಡೊಳ್ಳುಕುಣಿತ, ಬಳ್ಳಾರಿಯ ಎಂ.ನಾಗರಾಜಸ್ವಾಮಿ ಮತ್ತು ತಂಡದವರಿಂದ ವೀರಗಾಸೆ ಹಾಗೂ ದೊಡ್ಡಬಸಪ್ಪ ಮತ್ತು ತಂಡದವರಿಂದ ನಾಡಗೀತೆ, ಹಳೇದರೊಜಿ ಅಶ್ವರಾಮಣ್ಣ ಮತ್ತು ತಂಡದವರಿಂದ ಹಗಲುವೇಷÀ, ಸಿರಗುಪ್ಪ ದೊಡ್ಡರಾಮಣ್ಣ ಮತ್ತು ತಂಡದವರಿಂದ ಸಿಂದೋಳ್ ಕುಣಿತ,  ಹೊಸಪೇಟೆಯ ಶರಣಪ್ಪ ಮತ್ತು ತಂಡ ಕಹಳೆವಾದನ, ನಾರಾಯಣಪ್ಪ ಮತ್ತು ತಂಡದವರಿಂದ ನಾದಸ್ವರ, ಆಂಜನೇಯ ಮತ್ತು ತಂಡದವರಿಂದ ಡೊಳ್ಳುಕುಣಿತ, ಕಂಪ್ಲಿಯ ಕೆ.ಅಂಜಲಿ ಮತ್ತು ತಂಡದವರಿಂದ ಹಕ್ಕಿ ಪಿಕ್ಕಿ ಬುಡಕಟ್ಟು ನೃತ್ಯ, ಹೊಸಪೇಟೆಯ ಏಸುಪ್ ಮತ್ತು ತಂಡದವರಿಂದ ಮರಗಾಲುಕುಣಿತ, ಅಮೃತಾ ಮತ್ತು ತಂಡದವರಿಂದ ಶಾಸ್ತ್ರಿಯ ನೃತ್ಯ, ಹಡಗಲಿ ಮಲ್ಲಯ್ಯ ಮತ್ತು ತಂಡದವರ ಗೊರವರ ಕುಣಿತ, ಕೊಟ್ಟೂರು ವೀರಭದ್ರೇಶ್ವರ ವಾದ್ಯವೃಂದ ನಂದಿಧ್ವಜ ಕುಣಿತ, ಹರಪನಹಳ್ಳಿ ವಿಶ್ವಕಲಾ ರೈತ ಭಜನಾ ಸಂಘದಿಂದ ಕೀಲುಕುದುರೆ, ಕೂಡ್ಲಿಗಿ ದುರಗಮ್ಮ ಮತ್ತು ತಂಡದಿಂದ ಮಹಿಳಾ ಡೊಳ್ಳುಕುಣಿತ ಪ್ರದರ್ಶನಗಳು ಈ ಬಾರಿಯ ಹಂಪಿ ಉತ್ಸವದಲ್ಲಿ ಪಾಲ್ಗೊಂಡಿದ್ದವು.
ಈ ಸಂದರ್ಭದಲ್ಲಿ ಸಂಸದರಾದ ವೈ. ದೇವೇಂದ್ರಪ್ಪ,ಶಾಸಕರಾದ ಎಂ.ಎಸ್. ಸೋಮಲಿಂಗಪ್ಪ, ಹೊಸಪೇಟೆ ತಾಲ್ಲೂಕ್ ಪಂಚಾಯತ್ ಅಧ್ಯಕ್ಷರಾದ ಎನ್.ನಾಗವೇಣಿ ಬಸವರಾಜ್, ತಾಲೂಕು ಪಂಚಾಯತ್ ಸದಸ್ಯ ಪಾಲಪ್ಪ, ಕಮಲಾಪುರ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಸೈಯದ್ ಅಮಾನುಲ್ಲಾ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ನಿರ್ದೇಶಕರಾದ ಎಸ್. ರಂಗಪ್ಪ, ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಎಸ್ಪಿ ಸೈದುಲು ಅಡಾವತ್, ಜಿಪಂ ಸಿಇಒ ಕೆ.ಆರ್.ನಂದಿನಿ,ಹೊಸಪೇಟೆ ಸಹಾಯಕ ಆಯುಕ್ತ ಶೇಖ್ ತನ್ವೀರ್ ಅಸೀಫ್, ಪ್ರೊಬೇಷನರಿ ಐಎಎಸ್‌ ರಾಹುಲ್ ಸಂಕನೂರು,ಅಪರ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ ಮತ್ತಿತರರು ಇದ್ದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Share via
Copy link
Powered by Social Snap