ವಿಶ್ವ ಯೋಗ ದಿನಾಚರಣೆ : ಕೊಪ್ಪಳದಲ್ಲಿ ಸಂಸದರಿಂದ ಯೋಗಬ್ಯಾಸ. ಯೋಗವು ದೈಹಿಕ ಮತ್ತು ಮನೋಲ್ಲಾಸಕ್ಕೆ ಪೂರಕ.: ಸಂಗಣ್ಣ ಕರಡಿ

ಸಿರಿನಾಡ ಸುದ್ದಿ,ಕೊಪ್ಪಳ: ಐದು ವರ್ಷಗಳ ಹಿಂದೆ ಆರಂಭವಾದ ಯೋಗ ದಿನಾಚರಣೆ ವಿಶ್ವಕ್ಕೆ ಭಾರತದ ಕೊಡುಗೆ. 21ನೇ ಶತಮಾನದ ಹೈ ಫೈ ಯುಗದಲ್ಲಿ ಒತ್ತಡ ಸಾಮಾನ್ಯ. ಇಂಥ ಕಠಿನ ವಿಪ್ಲವದಲ್ಲಿ ಯೋಗಕ್ಕೆ ಮಹತ್ವ ಹೆಚ್ಚು. ಯೋಗವು ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಸೌಖ್ಯವನ್ನು ನೀಡುವ ಸಾಧನವಾಗಿದೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.
ವಿಶ್ವ ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಭಾನುವಾರ ನಗರದ ತಮ್ಮ ನಿವಾಸದಲ್ಲಿ ಯೋಗಭ್ಯಾಸ ಮಾಡಿದ ಬಳಿಕ ಮಾತನಾಡಿದ ಅವರು ಯೋಗಾಭ್ಯಾಸದಿಂದ ನಾವು ಮನಸ್ಸು ಮತ್ತು ದೇಹವನ್ನು ಸಮತೋಲನ ಹಾಗೂ ಕ್ಷೇಮದ ಏಕಸೂತ್ರದಲ್ಲಿ ತರಲು ಸಾಧ್ಯ. ಇಂತಹ ಯೋಗವನ್ನು ಜಗತ್ತಿಗೆ ಪರಿಚಯಿಸಿದ್ದು ಭಾರತೀಯರು ಎಂಬುದು ನಮ್ಮ ಹೆಮ್ಮೆ ಎಂದರು.
ಸುಮಾರು 6,000 ವರ್ಷಗಳ ಸುದೀರ್ಘವಾದ ಪರಂಪರೆಯ ಯೋಗವು ದೈಹಿಕ ಮತ್ತು ಮನೋಲ್ಲಾಸಕ್ಕೆ ಪೂರಕ. ದೇಹದಲ್ಲಿ ಶಕ್ತಿ ವರ್ಧನೆಗೆ ಯೋಗ ಪೂರಕ. ಪ್ರತಿದಿನ ಕೆಲವು ನಿಮಿಷಗಳ ಯೋಗಾಭ್ಯಾಸ ಮಾಡಿದರೆ ನಮ್ಮ ಶಕ್ತಿ ವರ್ಧಿಸುತ್ತದೆ, ನಮ್ಮನ್ನು ತಾಜಾ ಆಗಿ ಇಡುತ್ತದೆ ಎಂದು ಹೇಳಿದರು.
ಯೋಗದ ನಿತ್ಯಾಭ್ಯಾಸದಿಂದ ಅನೇಕ ಲಾಭಗಳಿವೆ. ಆರೋಗ್ಯದಲ್ಲಿ ಸುಧಾರಣೆ, ಮಾನಸಿಕ ಬಲವರ್ಧನೆ, ದೈಹಿಕ ಬಲ ಹೆಚ್ಚಳದ ಜತೆಗೆ ದೇಹದಲ್ಲಿನ ವಿಷಕಾರಿ ಅಂಶಗಳ ನಿವಾರಣೆ, ನಿತ್ಯವೂ ಕೆಲವು ನಿಮಿಷಗಳ ಕಾಲ ಯೋಗ ಮಾಡಿದರೆ ದೇಹ ಮತ್ತು ಮನಸ್ಸಿನಲ್ಲಿ ನಿತ್ಯ ಶೇಖರಣೆಯಾಗುವ ಒತ್ತಡದ ಬಿಡುಗಡೆಯಾಗುತ್ತದೆ. ಯೋಗಾಸನಗಳು, ಪ್ರಾಣಾಯಾಮ ಮತ್ತು ಧ್ಯಾನ ಒತ್ತಡ ನಿವಾರಣೆಗೆ ರಾಮಬಾಣವಾಗಿದೆ ಎಂದು ತಮ್ಮ ಅನುಭವವನ್ನು ಹಂಚಿಕೊಂಡರು.
ಮಾನವನ ಸಂರಚನಾತ್ಮಕ ವ್ಯವಸ್ಥೆಗಳಾದ ಭೌತಿಕ, ಮಾನಸಿಕ, ನೈತಿಕ ಮತ್ತು ಆಧ್ಯಾತ್ಮಿಕ ಜೀವನ ಶೈಲಿಗಳ ಜತೆಗೆ ಸಾಮರಸ್ಯ ಸೃಷ್ಟಿಸುವುದೇ ಪ್ರಕೃತಿ ಚಿಕಿತ್ಸೆ ಅಥವಾ ಯೋಗ ಚಿಕಿತ್ಸೆ. ಆರೋಗ್ಯ ವೃದ್ಧಿಸಲು, ರೋಗರುಜಿನಗಳನ್ನು ತಡೆಗಟ್ಟಲು ಮತ್ತು ಶಮನಗೊಳಿಸಲು, ಆರೋಗ್ಯವಂತ ಬದುಕು ಪಡೆಯಲು ಈ ಚಿಕಿತ್ಸಾ ಪದ್ಧತಿ ಸಹಾಯಕ : ಸಂಗಣ್ಣ ಕರಡಿ, ಸಂಸದರು, ಕೊಪ್ಪಳ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Share via
Copy link
Powered by Social Snap