ವಿದ್ಯಾರ್ಥಿಗೆ ಕೊರೊನಾ; ಅಗತ್ಯ ಎಚ್ಚರಿಕೆ ಕ್ರಮಗಳು ಕೈಗೊಂಡ ಜಿಲ್ಲಾಡಳಿತ ಪೋಷಕರಿಗೆ ಯಾವುದೇ ರೀತಿಯ ಆತಂಕ ಬೇಡ :ಡಿಸಿ ನಕುಲ್

ಸಿರಿನಾಡ ಸುದ್ದಿ, ಬಳ್ಳಾರಿ: ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದ‌‌ ಓರ್ವ ವಿದ್ಯಾರ್ಥಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಆ ವಿದ್ಯಾರ್ಥಿ ಪರೀಕ್ಷೆ ಬರೆದ ವಿಸ್ಡಮ್ ಲ್ಯಾಂಡ್ ಶಾಲೆಯ ಪರೀಕ್ಷಾ ಕೇಂದ್ರವನ್ನು ಸಂಪೂರ್ಣ ‌ಸ್ಯಾನಿಟೈಸ್ ಮಾಡಲಾಗಿದ್ದು, ವಿದ್ಯಾರ್ಥಿ ಪರೀಕ್ಷೆ ‌ಬರೆದ ಕೊಠಡಿಯ ಎಲ್ಲ ವಿದ್ಯಾರ್ಥಿಗಳಿಗೆ ಎನ್-95 ಮಾಸ್ಕ್ ಒದಗಿಸಿ ಅವರಿಗೆ 6 ಅಡಿ ಅಂತರದಂತೆ (ಒಂದು ಬೆಂಚ್ ಗೆ ಒಬ್ಬರಂತೆ) ವಿಶೇಷ ಕೊಠಡಿಯಲ್ಲಿ ಪರೀಕ್ಷೆ ಬರೆಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗಿದೆ ಎಂದು‌ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ.
ಈಗಾಗಲೇ ಆ ಪರೀಕ್ಷಾ ಕೇಂದ್ರದ ಎಲ್ಲ ಕೊಠಡಿಗಳಿಗೆ ಸಂಪೂರ್ಣ ಸ್ಯಾನಿಟೈಸ್ ಮಾಡಲಾಗಿದ್ದು, ಸೋಮವಾರ ಬೆಳಗ್ಗೆಯೂ‌ ಇನ್ನೊಂದು‌ ಬಾರಿ ಸ್ಯಾನಿಟೈಸ್ ಮಾಡಲಾಗುತ್ತದೆ ಎಂದು ವಿವರಿಸಿರುವ ಅವರು ಜೂ.25 ರಂದು ಇಂಗ್ಲೀಷ್ ಪರೀಕ್ಷೆ ಬರೆದು ಕಪಗಲ್ಲು ಗ್ರಾಮಕ್ಕೆ ಮೂರು ಜನ ಸ್ನೇಹಿತರೊಂದಿಗೆ ಬೈಕ್ ನಲ್ಲಿ ತೆರಳುವ ಸಂದರ್ಭದಲ್ಲಿ ಬೈಕ್ ಸ್ಕಿಡ್ ಆಗಿ ಬಿದ್ದ ಕಾರಣ ವಿಮ್ಸ್ ಗೆ ದಾಖಲಿಸಲಾಗಿತ್ತು ಎಂದಿದ್ದಾರೆ.
ಮೂರು‌ ಜನರಲ್ಲಿ ಇಬ್ಬರಿಗೆ ಮೂಳೆ ಮುರಿದ ಕಾರಣ ವಿಮ್ಸ್ ನಲ್ಲಿ ಒಳರೋಗಿಗಳಾಗಿ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಇದೇ ಸಂದರ್ಭದಲ್ಲಿ ಸ್ವ್ಯಾಬ್ ಕಲೆಕ್ಟ್ ಮಾಡಿ ಟೆಸ್ಟ್ ಗೆ ಕಳಿಸಲಾಗಿತ್ತು.ಇಬ್ಬರಲ್ಲಿ ಒಬ್ಬ ವಿದ್ಯಾರ್ಥಿ ವರದಿ ಪಾಸಿಟಿವ್‌‌ ಬಂದಿದೆ. ಇಬ್ಬರಲ್ಲಿ ಒಬ್ಬರಿಗೆ ಮಾತ್ರ ಕೊರೊನಾ ಪಾಸಿಟಿವ್ ಬಂದಿರುವುದನ್ನು ಗಮನಿಸಿದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರದಲ್ಲಿ ಕೊರೊನಾ ಸೊಂಕು ಹರಡಿರುವ ಸಾಧ್ಯತೆ ತೀರಾ ಕಡಿಮೆ ಇದೆ. ಅದಾಗಿಯೂ ಜಿಲ್ಲಾಡಳಿತವು ಶಿಕ್ಷಣ ಇಲಾಖೆ‌ಯ ಸುತ್ತೋಲೆ ಮತ್ತು ಸರಕಾರದ ಮಾರ್ಗಸೂಚಿಗಳ‌ ಅನುಸಾರ ಅಗತ್ಯ ಎಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಗಾಯಗೊಳ್ಳದ ಇನ್ನೋರ್ವ ವಿದ್ಯಾರ್ಥಿ ಜೂ.27ರಂದು ನಡೆದ ಪರೀಕ್ಷೆಗೆ ಹಾಜರಾಗಿದ್ದ. ಈ‌ ಮೂರು ಜನ ವಿದ್ಯಾರ್ಥಿಗಳು ಮುಂದಿನ ಪರೀಕ್ಷೆಗಳಿಗೆ ಹಾಜರಾಗುವುದಿಲ್ಲ; ಅವರನ್ನು ಪೂರಕ ಪರೀಕ್ಷೆಗೆ ಅವಕಾಶ ಕಲ್ಪಿಸಲಾಗುವುದು ಎಂದು ವಿವರಿಸಿದ್ದಾರೆ.
ಎಸ್ಒಪಿ ನಿಯಮಗಳ ಅನುಸಾರ ಪರೀಕ್ಷಾ ಕೇಂದ್ರದಲ್ಲಿ ಎಲ್ಲ ರೀತಿಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಯಾವುದೇ ರೀತಿಯ ಆತಂಕ ಬೇಡ. ವಿದ್ಯಾರ್ಥಿಗಳು ‌ನಿರಾತಂಕವಾಗಿ ಬಂದು ಪರೀಕ್ಷೆ ಬರೆಯಬೇಕು ಎಂದು ಮನವಿ ಮಾಡಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Share via
Copy link
Powered by Social Snap