ಜಿಲ್ಲೆಯಲ್ಲಿ ಇದೂವರೆಗೂ ಕೊರೋನಾ ಪಾಸಿಟಿವ್ ವರದಿಯಾಗಿಲ್ಲ: ಜಿಲ್ಲಾಧಿಕಾರಿ ಆರ್. ವೆಂಕಟೇಶ ಕುಮಾರ

ರಾಯಚೂರು: ಶಂಕಿತ ಕೊರೋನಾ ವೈರಾಣು ರೋಗದ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಇದೂವರೆಗೂ ೧೧ ಜನರ ರಕ್ತ ಹಾಗೂ ಗಂಟಲಿನ ದ್ರವವನ್ನು ಪರೀಕ್ಷೆಗಾಗಿ ಕಳುಹಿಸಲಾಗಿದ್ದು, ಯಾವುದೇ ಪಾಸಿಟಿವ್ ವರದಿಯಾಗಿಲ್ಲ ಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶ ಕುಮಾರ ತಿಳಿಸಿದರು.
ಶುಕ್ರವಾರ ನಗರದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು.
ಇದೂವರೆಗೂ ಜಿಲ್ಲೆಯಲ್ಲಿ ಕೋವಿಡ್-೧೯ನ ಯಾವುದೇ ಪಾಸಿಟಿವ್ ಪ್ರಕರಣ ವರದಿಯಾಗಿಲ್ಲ, ಆದರೂ ಜಿಲ್ಲಾಡಳಿತ ಸಕಲ ರೀತಿಯ ಸಿದ್ದತೆಗಳನ್ನು ಮಾಡಿಕೊಂಡಿದೆ. ಒಟ್ಟು ೫ ಹಂತದ ಪೂರ್ವ ತಯಾರಿ ಮಾಡಿಕೊಳ್ಳಲಾಗಿದ್ದು, ಮೊದಲ ಹಂತದಲ್ಲಿ ಜಿಲ್ಲೆಯಲ್ಲಿ ೧೫ ಫಿವರ್ ಕ್ಲಿನಿಕ್‌ಗಳನ್ನು ತೆರೆಯಲಾಗುತ್ತಿದೆ, ಅಲ್ಲಿ ಕೆಮ್ಮು, ನೆಗಡಿ, ಶೀತ, ಜ್ವರ, ಉಸಿರಾಟದ ತೊಂದರೆ ಪರೀಕ್ಷೆಗೆ ಒಳಪಡಿಸಲಾಗುವುದು, ರೋಗ ಲಕ್ಷಣಗಳು ಕಂಡುಬAದರೆ ಅವರ ರಕ್ತ ಹಾಗೂ ಗಂಟಲಿನ ದ್ರವವನ್ನು ಸಂಗ್ರಹಿಸಿ ಪರೀಕ್ಷೆಗಾಗಿ ಲ್ಯಾಬ್‌ಗೆ ಕಳುಹಿಸಲಾಗುವುದು, ರಾಯಚೂರು ನಗರದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಈ ಫಿವರ್ ಕ್ಲಿನಿಕ್‌ಗಳನ್ನು ಆರಂಭಿಸಲಾಗುವುದು ಎಂದರು.
ಎರಡನೇ ಹಂತದಲ್ಲಿ ಫೀವರ್ ಕ್ಲಿನಿಕ್‌ಗಳಲ್ಲಿ ತಪಾಸಣೆ ಆಗುವ ಶಂಕಿತ ರೋಗ ಲಕ್ಷಣಗಳುಳ್ಳವರನ್ನು ಕ್ವಾರಂಟನ್ ಕೇರ್‌ನಲ್ಲಿ ಇರಿಸಲಾಗುವುದು. ಅದಕ್ಕಾಗಿ ಜಿಲ್ಲೆಯಲ್ಲಿ ಸಮುದಾಯ ಭವನಗಳು, ಕಲ್ಯಾಣ ಮಂಟಪಗಳು, ವಿವಿಧ ಆಸ್ಪತ್ರೆಗಳಲ್ಲಿ ೧೮೦೦ ಹಾಸಿಗೆಗಳನ್ನು ಚಿಕಿತ್ಸೆಗಾಗಿ ವ್ಯವಸ್ಥೆ ಮಾಡಿಕೊಳ್ಳಲಾಗಿದೆ, ಎಲ್ಲಾ ತಾಲೂಕುಗಳ ಕೇಂದ್ರಗಳಲ್ಲಿ ಕ್ವಾರಂಟೈನ್ ಕೇರ್‌ಗಳನ್ನು ಆರಂಭಿಸಲಾಗುವುದು ಎಂದು ತಿಳಿಸಿದರು.
ಮೂರನೇ ಹಂತದಲ್ಲಿ ಕ್ವಾರಂಟೈನ್ ಕೇರ್‌ಗಳಲ್ಲಿ ಗುರುತಿಸಲಾದವರನ್ನು ಎಸ್‌ಐಸಿ-ಸೂಪರ್‌ವೈಸರ್ ಐಸೋಲೇಷನ್ ಕೇರ್‌ಗೆ ದಾಖಲಿಸಲಾಗುವುದು, ಅದಕ್ಕಾಗಿ ೧೦೦೦ ಹಾಸಿಗೆಯ ಸಾಮರ್ಥ್ಯದ ಸೂಪರ್ ವೈಸರ್ ಐಸೋಲೇಷನ್ ಕೇರ್‌ಗಳನ್ನಾಗಿ ಸಮುದಾಯ ಭವನಗಳು, ಕೆಲವೊಂದು ಆಸ್ಪತ್ರೆಗಳನ್ನು ಗುರುತಿಸಲಾಗಿದೆ ಎಂದರು.
ನಾಲ್ಕನೇ ಹಂತದಲ್ಲಿ ಶಂಕಿತರಿಗೆ ಕೊರೋನಾ ದೃಢಪಟ್ಟಲ್ಲಿ, ಅವರ ಚಿಕಿತ್ಸೆಗಾಗಿ ಕೋವಿಡ್ ಆಸ್ಪತ್ರೆಗಳನ್ನಾಗಿ ನಗರದಲ್ಲಿರುವ ರಿಮ್ಸ್, ಒಪೆಕ್ ಹಾಗೂ ನವೋದಯಗಳನ್ನು ಪರಿವರ್ತಿಸಲಾಗಿದೆ. ಈ ಮೂರು ಆಸ್ಪತೆಗಳಲ್ಲಿ ೫೦೦ ಹಾಸಿಗೆಗಳ ಸಾಮರ್ಥ್ಯದ ವಾರ್ಡ್ಗಳು ಹಾಗೂ ಐಸೋಲೇಷನ್ ವಾರ್ಡ್ಗಳನ್ನು ಸಿದ್ದಪಡಿಸಲಾಗಿದ್ದು, ಆಮ್ಲಜನಕ ಸೇರಿದಂತೆ ಅಗತ್ಯಗಳ ಪೂರೈಕೆಗೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಇನ್ನೂ ಐದನೇ ಹಂತದಲ್ಲಿ ತೀವ್ರ ಚಿಕಿತ್ಸೆಯ ಐಸಿಯುಗಳು ಸಿದ್ದಗೊಂಡಿವೆ. ರಿಮ್ಸ್, ಒಪೆಕ್ ಹಾಗೂ ನವೋದಯದಲ್ಲಿ ಕೊರೋನಾ ಚಿಕಿತ್ಸೆಗಾಗಿ ತೀವ್ರ ಚಿಕಿತ್ಸಾ ಕೇಂದ್ರಗಳು ಸಿದ್ದಗೊಂಡಿದೆ ಎಂದು ಜಿಲ್ಲಾಧಿಕಾರಿಯವರು ತಿಳಿಸಿದರು.
ಈಗಾಗಲೇ ವಿದೇಶಗಳಿಂದ ಜಿಲ್ಲೆಗೆ ೧೭೭ ಜನರು ಬಂದಿದ್ದಾರೆ. ಅವರೊಂದಿಗೆ ಸಂಕರ್ಪದಲ್ಲಿದ್ದ ೭೪೪ ಜನರನ್ನು ಹೋಮ್ ಕ್ವಾರಂಟ್‌ನಲ್ಲಿರಿಸಲಾಗಿದ್ದು, ಅವರಲ್ಲಿ ೭೦೦ ಜನರು ೧೪ ದಿನಗಳ ಅವಧಿಯನ್ನು ಪೂರೈಸಿದ್ದಾರೆ. ೪೪ ಜನರನ್ನು ಮನೆಯಲ್ಲಿರಿಸಿ ನಿಗಾ ವಹಿಸಲಾಗಿದೆ, ಆರೋಗ್ಯ ಕಾರ್ಯಕರ್ತರು ಪ್ರತಿ ದಿನ ಅವರ ಆರೋಗ್ಯವನ್ನು ತಪಾಸಣೆ ನಡೆಸುತ್ತಿದ್ದಾರೆ ಎಂದರು.
ದೆಹಲಿಯ ನಿಜಾಮುದ್ದಿನ್ ಸಭೆಗೆ ತೆರಳಿದ್ದ ಮಸ್ಕಿ ತಾಲೂಕಿನ ಇಬ್ಬರು ವಾಪಸ್ ಬಂದಿದ್ದಾರೆ, ಅವರು ೨೧ ದಿನಗಳ ಅವಧಿ ಪೂರೈಸಿದ್ದು, ಯಾವುದೇ ರೋಗ ಲಕ್ಷಣವಿಲ್ಲ, ಬೇರೆ ರಾಜ್ಯ ಹೋಗಿ ಬಂದವರು ೨೦ ಜನರಿದ್ದಾರೆ. ಅವರಲ್ಲಿ ಯಾರಿಗೂ ರೋಗದ ಲಕ್ಷಣವಿಲ್ಲ, ಅವರನ್ನು ಸರ್ಕಾರಿ ಕ್ವಾರಂಟೈನ್‌ನಲ್ಲಿಡಲಾಗಿದೆ, ಸಿ.ಆರ್.ಎಫ್ ಅನುದಾನದಲ್ಲಿ ೩೦-೩೫ ಲಕ್ಷ ಖರ್ಚು ಮಾಡಲಾಗಿದೆ. ಜಿಲ್ಲೆಯಲ್ಲಿ ಸದ್ಯ ಯಾವುದೇ ಹಣದ ಕೊರತೆ ಇಲ್ಲಾ ಎಂದರು.
ಅಪರ ಜಿಲ್ಲಾಧಿಕಾರಿ ದುರಗೇಶ, ರಾಯಚೂರು ಸಹಾಯಕ ಆಯುಕ್ತರಾದ ಸಂತೋಷ ಕಾಮಗೌಡ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಮಕೃಷ್ಣ, ಡಾ.ಕೆ.ನಾಗರಾಜ್ ಉಪಸ್ಥಿತರಿದ್ದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Share via
Copy link
Powered by Social Snap