ಜನಮನಸೂರೆಗೊಂಡ ತುಂಗಾರತಿ ಮಹೋತ್ಸವ

ಎಲ್ಲಿ ನೋಡಿದರಲ್ಲಿಯೂ ದೀಪಗಳ ಸಾಲು..ಬೆಳಕಿನ ವೈಭವ…
ಜನಮನಸೂರೆಗೊಂಡ ತುಂಗಾರತಿ ಮಹೋತ್ಸವ
ಹಂಪಿ: ಪವಿತ್ರ ತುಂಗಾಭದ್ರಾ ನದಿಯ ದಡದ ಎಲ್ಲಿ ನೋಡಿದರಲ್ಲಿಯೂ ದೀಪಗಳ ಸಾಲು ಸಾಲು…ಬೆಳಕಿನ ವೈಭವ.ನದಿಯಲ್ಲಿ ಬಂಡೆಗಳ ಮೇಲೂ ಉರಿದ ಹಣತೆ…ನದಿಗೆ ಬಾಗಿನ ಸಮರ್ಪಣೆ..
ಹಂಪಿ ಉತ್ಸವದ ನಿಮಿತ್ತ ವಿರೂಪಾಕ್ಷೇಶ್ವರ ದೇವಸ್ಥಾನದ ಪಕ್ಕದಲ್ಲಿರುವ ತುಂಗಾಭದ್ರಾ ನದಿ ದಡದಲ್ಲಿ ಶುಕ್ರವಾರ ರಾತ್ರಿ ನಡೆದ ತುಂಗಾರತಿ ಮಹೋತ್ಸದಲ್ಲಿ ಕಂಡುಬಂದ ದೃಶ್ಯ. ಈ ತುಂಗಾರತಿ ಮಹೋತ್ಸವವು ಜನಮನಸೂರೆಗೊಂಡಿತು.
ನದಿದಡದಲ್ಲಿಯೇ ಸುಂದರ ಮಂಟಪ ನಿರ್ಮಿಸಿ ತಾಯಿ ಭುವನೇಶ್ವರಿದೇವಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು.
ವಿವಿಧ ರೀತಿಯ ಧಾರ್ಮಿಕ ಆಚರಣೆಗಳ ಮೂಲಕ ಒಂದು ಗಂಟೆಗೂ ಹೆಚ್ಚು ಕಾಲ ತುಂಗಾಭದ್ರಾ ನದಿ ಮತ್ತು ಭುವನೇಶ್ವರಿ ದೇವಿಗೆ ವಿಶೇಷವಾದ ಪೂಜೆ ಸಲ್ಲಿಸಲಾಯಿತು. ಭುವನೇಶ್ವರಿ ದೇವಿಗೆ ಹಾಗೂ ತುಂಗಾಭದ್ರೆಗೆ ವಿವಿಧ ಬಗೆಯ ಆರತಿಗಳನ್ನು ಬೆಳಗಲಾಯಿತು.
ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎಸ್.ಆನಂದಸಿಂಗ್, ಸಂಸದ ವೈ.ದೇವೇಂದ್ರಪ್ಪ, ಶಾಸಕರಾದ ಸೋಮಲಿಂಗಪ್ಪ,ಅಲ್ಲಂ ವೀರಭದ್ರಪ್ಪ,ಜಿಲ್ಲಾಧಿಕಾರಿ ಎಸ್.ಎಸ್.ನಕುಲ್, ಎಸ್ಪಿ ಸೈದುಲು ಅಡಾವತ್,ಜಿಪಂ ಸಿಇಒ ಕೆ.ಆರ್.ನಂದಿನಿ ಸೇರಿದಂತೆ ಇನ್ನೀತರರು ಭಾಗವಹಿಸಿದ್ದರು.
ಮಂಗಳವಾದ್ಯಗಳ ಮಧ್ಯೆ ನದಿಗೆ ಬಾಗಿನ ಅರ್ಪಿಸಲಾಯಿತು. ಪುರಾಣಪ್ರಸಿದ್ಧ ಕ್ಷೇತ್ರವಾದ ಹಂಪಿಯಲ್ಲಿ ಆರತಿ ಬೆಳಗಿ, ನದಿಗೆ ಬಾಗೀನ ಅರ್ಪಿಸಲಾಯಿತು. ನದಿಯ ಸುತ್ತಲೂ ದೀಪಗಳನ್ನು ಹಚ್ಚಲಾಗಿತ್ತು.
ಕಳೆದ 4 ಉತ್ಸವಗಳಿಂದಲೂ ಹಂಪಿ ಉತ್ಸವದಲ್ಲಿ ತುಂಗಾರತಿ ಮಾಡುತ್ತಿರುವುದು ವಿಶೇಷ.