ಕರೊನಾ ಸೋಂಕಿನ 3 ಹೊಸ ಲಕ್ಷಣಗಳು ಪತ್ತೆ; ಎಚ್ಚರ. ನಿಮ್ಮಲ್ಲಿ ಈ ಸಮಸ್ಯೆಗಳು ಕಾಣಿಸಿಕೊಂಡರೆ ನಿರ್ಲಕ್ಷ್ಯ ಬೇಡ

ನವದೆಹಲಿ: ಮಹಾಮಾರಿ ಕರೊನಾ ಸೋಂಕಿನ ಪ್ರಮುಖ 9 ಲಕ್ಷಣಗಳನ್ನು ಯುಎಸ್​ನ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳು ಈಗಾಗಲೇ ತಿಳಿಸಿದ್ದು, ಇದೀಗ ಮತ್ತೂ ಮೂರು ಹೊಸ ಲಕ್ಷಣಗಳನ್ನು ಪಟ್ಟಿ ಮಾಡಿವೆ.
ಜ್ವರ, ಶೀತ, ಕೆಮ್ಮು, ಉಸಿರಾಟದ ತೊಂದರೆ, ಆಯಾಸ, ಸ್ನಾಯು ಸೆಳೆತ, ಇಡೀ ದೇಹದ ನೋವು, ತಲೆ ನೋವು, ರುಚಿ ಮತ್ತು ವಾಸನೆ ಗ್ರಹಿಕೆ ಇಲ್ಲದಿರುವುದು, ಗಂಟಲು ಉರಿ ಇವೆಲ್ಲ ಕೊವಿಡ್​-19 ಸೋಂಕಿನ ಲಕ್ಷಣಗಳು ಎಂದು ಹೇಳಲಾಗಿತ್ತು. ಆದರೆ ಕರೊನಾ ಬಂದರೆ ಇವಿಷ್ಟೇ ಅಲ್ಲ, ಇನ್ನೂ ಮೂರು ಲಕ್ಷಣಗಳು ಕಾಣಬಹುದು ಎಂದು ಅಮೆರಿಕದ ಆರೋಗ್ಯ ರಕ್ಷಣಾ ಸಂಸ್ಥೆಗಳು ಹೇಳಿವೆ.
ಮೂಗು ಕಟ್ಟುವುದು ಮತ್ತು ಸುರಿಯುವುದು, ವಾಕರಿಕೆ, ಅತಿಸಾರ(ಭೇದಿ) ಈ ಮೂರು ಲಕ್ಷಣಗಳು ಕಾಣಿಸಿಕೊಳ್ಳುತ್ತಿದ್ದರೆ ಅದೂ ಕೂಡ ಕರೊನಾ ದೇಹದೊಳಗೆ ಹೊಕ್ಕಿದ್ದರ ಲಕ್ಷಣವೇ ಇರಬಹುದು. ಯಾವುದಕ್ಕೂ ಮುನ್ನೆಚ್ಚರಿಕೆ ಇರಲಿ ಎಂದು ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳು (ಸಿಡಿಸಿ) ಎಚ್ಚರಿಕೆ ನೀಡಿದೆ.
ಸಿಡಿಸಿ ಇಲ್ಲಿಯವರೆಗೆ ಒಟ್ಟು 12 ಕರೊನಾ ಸೋಂಕಿನ ಲಕ್ಷಣಗಳನ್ನು ಪಟ್ಟಿ ಮಾಡಿದೆ. ಆದರೆ ಆತಂಕಕಾರಿ ಸಂಗತಿಯೆಂದರೆ ಅನೇಕ ಕಡೆ ಇದ್ಯಾವುದೂ ಲಕ್ಷಣಗಳನ್ನೇ ತೋರಿಸದೆ ಕರೊನಾ ಪಾಸಿಟಿವ್​ ದೃಢಪಡುತ್ತಿದೆ.
ಎಲ್ಲರಿಗೂ ಒಂದೇ ತರಹದ ಲಕ್ಷಣಗಳು ಕಾಣಿಸಬೇಕೆಂದು ಇಲ್ಲ. ಹಾಗೇ ಕೊವಿಡ್​-19 ಕಾಯಿಲೆಯ ಗಂಭೀರತೆಯ ಪ್ರಮಾಣವೂ ಕೂಡ ಜನರಿಂದ ಜನರಿಗೆ ವ್ಯತ್ಯಾಸವಾಗುತ್ತದೆ. ಒಬ್ಬೊಬ್ಬರಿಗೆ ಒಂದೊಂದು ತರಹದ ಲಕ್ಷಣಗಳ ಮೂಲಕ ಕರೊನಾ ಕಾಣಿಸಿಕೊಳ್ಳಬಹದು. ಸೋಂಕು ನಮ್ಮ ದೇಹವನ್ನು ಪ್ರವೇಶಿಸಿದ 2 ರಿಂದ 14 ದಿನಗಳಲ್ಲಿ ಲಕ್ಷಣಗಳು ಗೋಚರಿಸುತ್ತವೆ ಎಂದು ಸಿಡಿಸಿ ತನ್ನ ವೆಬ್​ಸೈಟ್​ನಲ್ಲಿ ಬರೆದಿದೆ.
ಕೊವಿಡ್​-19ನ 12 ಲಕ್ಷಣಗಳನ್ನೊಳಗೊಂಡ ಈ ಪಟ್ಟಿಯೇ ಅಂತಿಮವಲ್ಲ. ಸೋಂಕಿನ ಬಗ್ಗೆ ಅಧ್ಯಯನಗಳನ್ನು ನಡೆಸುತ್ತಿರುವ ಸಿಡಿಸಿ ಮುಂದಿನ ದಿನಗಳಲ್ಲಿ ಇದನ್ನು ಅಪ್​ಡೇಟ್​ ಮಾಡುತ್ತಲೇ ಇರುತ್ತದೆ ಎಂದೂ ಆರೋಗ್ಯ ರಕ್ಷಣಾ ಸಂಸ್ಥೆ ತಿಳಿಸಿದೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Share via
Copy link
Powered by Social Snap