ಉತ್ತಮ ಮಳೆ ಮೈತುಂಬಿ ಹರಿದ ವೇದಾವತಿ ಹಗರಿ ನದಿ.

????????????????????????????????????

ಸಿರಿನಾಡ ಸುದ್ದಿ, ಸಿರುಗುಪ್ಪ: ತಾಲೂಕಿನಲ್ಲಿ ಸುರಿದ ಭಾರಿ ಮಳೆಯಿಂದಾಗಿ ಸಿರುಗುಪ್ಪ-ಆದೋನಿಗೆ ಸಂಪರ್ಕ ಕಲ್ಪಿಸುವ ಅಂತರ್‌ರಾಜ್ಯ ಹೆದ್ದಾರಿಯಲ್ಲಿ ಬರುವ ರಾರಾವಿ ಗ್ರಾಮದ ಹತ್ತಿರ ವೇದಾವತಿ ಹಗರಿ ನದಿ ತುಂಬಿ ಹರಿಯುತ್ತಿದ್ದು, ಸೇತುವೆಯ ಮೇಲ್ಭಾಗಕ್ಕೆ ನೀರು ತುಂಬಲು ಕೆಲವೇ ಅಡಿಗಳಷ್ಟು ನೀರು ಬಾಕಿ ಇವೆ. ಕಳೆದ ಕೆಲವು ದಿನಗಳಿಂದ ಹಗರಿ ನದಿ ವ್ಯಾಪ್ತಿಯಲ್ಲಿನ ಪ್ರದೇಶಗಳಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಜಮೀನುಗಳ ನೀರು ಹಳ್ಳ ಮತ್ತು ಹಗರಿಗೆ ಹರಿದು ಬಂದಿದ್ದರಿ0ದ ವೇದಾವತಿ ಹಗರಿ ನದಿ ತುಂಬಿ ಹರಿಯುತ್ತಿದೆ.
ತಾಲೂಕಿನ ಜೀವಾಳವಾಗಿರುವ ವೇದಾವತಿ ಹಗರಿ ನದಿಯ ನೀರು ಬಳಸಿ ಜಮೀನುಗಳಲ್ಲಿ ಭತ್ತ ಬೆಳೆಯಲು ಪಂಪ್‌ಸೆಟ್‌ಗಳನ್ನು ಅಳವಡಿಸಿರುವ ರೈತರು ನದಿಯಲ್ಲಿ ನೀರು ಹೆಚ್ಚಿದ್ದರಿಂದ ಪಂಪ್‌ಸೆಟ್‌ಗಳು ಹಾಗೂ ಪೈಪ್‌ಲೈನ್‌ಗಳು ಕೊಚ್ಚಿ ಹೋಗದಂತೆ ಮುಂಜಾಗ್ರತೆಯಾಗಿ ಪಂಪ್‌ಸೆಟ್‌ಗಳನ್ನು ಬಿಚ್ಚಿ ಸುರಕ್ಷಿತ ಸ್ಥಳಗಳಲ್ಲಿ ಮರು ಜೋಡಣೆ ಮಾಡುವ ದೃಶ್ಯ ಸಾಮಾನ್ಯವಾಗಿತ್ತು.
ಹಗರಿನದಿ ಪಾತ್ರದಲ್ಲಿನ ಶಾಲಿಗನೂರು, ರಾರಾವಿ, ಶ್ರೀನಗರ ಕ್ಯಾಂಪ್, ಬಗ್ಗೂರು, ಚಾಣಕನೂರು, ತೊಂಡೆಹಾಳು, ಗಜಿಗಿನಹಾಳು, ಕರ್ಚಿಗನೂರು, ಕುಡುದರಹಾಳು ಸೇರಿದಂತೆ ಇತರೆ ಗ್ರಾಮಗಳಲ್ಲಿ ಕೃಷಿ ಚಟುವಟಿಕೆಗಳು ಪ್ರಾರಂಭಗೊ0ಡಿದ್ದು, ರೈತರು ತಮ್ಮ ಜಮೀನುಗಳಲ್ಲಿ ಭತ್ತ ನಾಟಿ ಮಾಡಲು ಜಮೀನು ಸಿದ್ಧಪಡಿಸಿಕೊಂಡು ಸಸಿ ಖರೀದಿಸಿ ಮಡಿಗಳಲ್ಲಿ ಬಿತ್ತನೆ ಪ್ರಾರಂಭಿಸಿದ್ದಾರೆ. ಈ ಭಾಗದಲ್ಲಿ ಹಗರಿನದಿ, ತುಂಗಭದ್ರ ನದಿ, ಕಾಲುವೆ ನೀರನ್ನು ಬಳಸಿ ಪ್ರಮುಖವಾಗಿ ಭತ್ತದ ಬೆಳೆಯನ್ನು ರೈತರು ಬೆಳೆಯುತ್ತಾರೆ.
ಈ ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾಗಿದ್ದರಿಂದ ಮಳೆಯಾಶ್ರಿತ ಬೆಳೆಗಳಾದ ಹತ್ತಿ, ತೊಗರಿ, ಜೋಳ, ಸಜ್ಜೆ, ನವಣೆ, ಸೂರ್ಯಕಾಂತಿ, ಮೆಣಸಿನಕಾಯಿ, ಕುಸುಬೆ ಸೇರಿದಂತೆ ಇತರ ಬೆಳೆಗಳನ್ನು ಬೆಳೆಯಲು ರೈತರು ಬಿತ್ತನೆಯಲ್ಲಿ ತೊಡಗಿರುವುದನ್ನು ಕಾಣಬಹುದು.
ಪಂಪ್‌ಸೆಟ್‌ಗಳ ಸುರಕ್ಷ ಕಾರ್ಯದಲ್ಲಿ ರೈತರು: ಹಗರಿನದಿ ತುಂಬಿ ಹರಿಯುತ್ತಿರುವುದರಿಂದ ಸುತ್ತಮುತ್ತಲ ಗ್ರಾಮಗಳ ರೈತರು ಹಗರಿ ನದಿಗೆ ಅಳವಡಿಸಿರುವ ಪಂಪ್‌ಸೆಟ್‌ಗಳು ಮುಳುಗಿ ಹೋಗುತ್ತಿದ್ದು, ರೈತರು ತಮ್ಮ ಪಂಪ್‌ಸೆಟ್‌ಗಳನ್ನು ಬಿಚ್ಚಿ ಸುರಕ್ಷಿತ ಸ್ಥಳಗಳಿಗೆ ಸಾಗಿಸಿದರು.
ರೈತ ಶೇಖರ್ ಮಾತನಾಡಿ ಹಗರಿನದಿಗೆ ನೀರಿನ ಪ್ರಮಾಣ ಕಡಿಮೆಯಾದಾಗ ನೀರು ಹರಿಯುವ ಕಡೆ ನದಿಯ ಮಧ್ಯಬಾಗದಲ್ಲಿ ಪಂಪ್‌ಸೆಟ್‌ಗಳನ್ನು ಅಳವಡಿಸಿದ್ದೇವು, ಆದರೆ ಕಳೆದ ಕೆಲವು ದಿನಗಳಿಂದ ಮಳೆಯ ಪ್ರಮಾಣ ಹೆಚ್ಚಾಗಿದ್ದು, ಪಂಪ್‌ಸೆಟ್‌ಗಳಲ್ಲಿ ನೀರು ನುಗ್ಗಿ ಹಾಳಾಗದಂತೆ ಮುನ್ನೆಚ್ಚರಿಕೆಯಾಗಿ ಸ್ಥಳಾಂತರಿಸುತ್ತಿರುವುದಾಗಿ ತಿಳಿಸಿದರು.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Share via
Copy link
Powered by Social Snap